ನೇರಸಾಲ ಯೋಜನೆ: ಅರ್ಜಿ ಆಹ್ವಾನ


ಉಡುಪಿ, ಸೆ.16: ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಹಾಗೂ ಹಣಕಾಸು ನಿಗಮವು 2014-15ರ ಸಾಲಿಗೆ ನೇರಸಾಲ ಯೋಜನೆ ಯಡಿಯಲ್ಲಿ ಮತೀಯ ಅಲ್ಪಸಂಖ್ಯಾತರು ಅಂದರೆ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗದವರು ಕೈಗೊಳ್ಳುವ ಕೃಷಿ, ತೋಟಗಾರಿಕೆ, ವಾಹನ ಸೇರಿದಂತೆ ಎಲ್ಲಾ ವ್ಯಾಪಾರ ಚಟುವಟಿಕೆಗಳಿಗೆ 1 ಲಕ್ಷದಿಂದ 5 ಲಕ್ಷ ರೂ. ಮೀರದಂತೆ ಶೇ.6ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಿದೆ. ಇದನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಆಸಕ್ತರು ಅರ್ಜಿಗಳನ್ನು ಜಿಲ್ಲಾ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಜಿಲ್ಲಾಧಿಕಾರಿ ಕಚೇರಿ, ಎ ಬ್ಲಾಕ್, 1ನೇ ಮಹಡಿ, ರಜತಾದ್ರಿ, ಮಣಿಪಾಲ, ಉಡುಪಿ ಜಿಲ್ಲೆ-576104 ಇವರಿಂದ ಪಡೆದು ಅ.6ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ(0820-2574990)ಯನ್ನು ಸಂಪ ರ್ಕಿಸುವಂತೆ ಕೋರಲಾಗಿದೆ.

ಗಂಗೊಳ್ಳಿ : ಬೀಳ್ಕೊಡುಗೆ ಸಮಾರಂಭ


gangoll
ಗಂಗೊಳ್ಳಿ:- ಗಂಗೊಳ್ಳಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಕೆ.ಉಮೇಶ್ ಅವರನ್ನು ಗಂಗೊಳ್ಳಿ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಬೀಳ್ಕೊಡಲಾಯಿತು.
ಗಂಗೊಳ್ಳಿಯ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರಗಿದ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಅವರು ಕೆ.ಉಮೇಶ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕುಂದಾಪುರ ಶಾಖೆಯ ಅಧ್ಯಕ್ಷ ದಿನಕರ ಶೆಟ್ಟಿ, ಗಂಗೊಳ್ಳಿ ಕ್ಲಸ್ಟರ್‌ನ ಸಿ‌ಆರ್‌ಪಿ ತಿಲೋತ್ತಮಾ, ಕೋಣಿ ಸಿ‌ಆರ್‌ಪಿ ಸುಮನಾ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ರಮೇಶ ಮಹಾಲೆ, ಸಹಶಿಕ್ಷಕರಾದ ರಾಜೀವ ಶೆಟ್ಟಿ ಮತ್ತು ರಾಜೇಶ್ ಅನಿಸಿಕೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಜಾತಾ ಕೆ. ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಸ.ವಿ.ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಶೆಟ್ಟಿ ವಂದಿಸಿದರು.

ಹೆರಿಗೆಯ ಬಳಿಕ ಹೊಟ್ಟೆಯಲ್ಲಿಯೇ ಕರವಸ್ತ್ರ ಇಟ್ಟು ಹೊಲಿಗೆ ಹಾಕಿದ ಕುಂದಾಪುರದ ವೈದ್ಯರು!


de

ಕುಂದಾಪುರ:-ಸಿಸೇರಿಯನ್ ಹೆರಿಗೆಯ ಬಳಿಕ ಹೊಟ್ಟೆಯಲ್ಲಿಯೇ ಕರವಸ್ತ್ರಕ್ಕಿಂತ ದೊಡ್ಡ ಬಟ್ಟೆಯನ್ನು ಬಿಟ್ಟು ಹೊಟ್ಟೆಗೆ ಹೊಲಿಗೆ ಹಾಕಿದ ಕಳವಳಕಾರಿ ಘಟನೆಯೊಂದು ಉಡುಪಿ ಜಿಲ್ಲೆಯ ಕುಂದಾಪುರದಿಂದ ವರದಿಯಾಗಿದೆ. ಕುಂದಾಪುರ ತಾಲೂಕಿನ ಶಾನಾಡಿ ಎಂಬ ಹಳ್ಳಿಯೊಂದರಲ್ಲಿರುವ ಸುಲೋಚನಾ ಶೆಟ್ಟಿ ಕುಂದಾಪುರದ ಶ್ರೀದೇವಿ ನರ್ಸಿಂಗ್ ಹೋಂನಲ್ಲಿ ಹೆರಿಗೆಗೆಂದು ದಾಖಲಾಗಿದ್ದರು. ಸುಲೋಚನಾ ಅವರಿಗೆ ಸಿಸೇರಿಯನ್ ಹೆರಿಗೆ ಮಾಡಲಾಗಿತ್ತು. ಆಸ್ಪತ್ರೆಯಿಂದ ಮನೆಗೆ ಮರಳಿದ ಬಳಿಕ ಸುಲೋಚನಾ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು, ಸ್ಥಳೀಯ ವಿಕ್ರಂ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಸ್ಕ್ಯಾನ್ ಕೂಡ ಮಾಡಿಸಿದ್ದರು. ಪುನಃ ಶ್ರೀದೇವಿ ನರ್ಸಿಂಗ್ ಹೋಮ್‌ಗೆ ಸ್ಕ್ಯಾನ್ ರಿಪೋರ್ಟ್ ಸಮೇತ ಬಂದಾಗ ಔಷಧೋಪಚಾರ ಬರೆದುಕೊಟ್ಟ ವೈದ್ಯರು ಹೊಟ್ಟೆ ನೋವು ಮತ್ತೆ ಕಾಣಿಸಿಕೊಂಡರೆ ಸಣ್ಣ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ಹೇಳಿದ್ದರಂತೆ. ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿದಾಗ ಸುಲೋಚನಾ ಅವರ ಪತಿ ಮತ್ತು ಸಂಬಂಧಿಕರು ಗಾಬರಿಗೊಂಡು ಬೆಂಗಳೂರಿಗೆ ಸುಲೋಚನಾ ಅವರನ್ನು ಕರೆದುಕೊಂಡು ಹೋಗಿದ್ದಾರೆ.

ಒಂದೆರಡು ಕಡೆ ಚಿಕಿತ್ಸೆ ಮಾಡಿದ್ದರೂ ಹೊಟ್ಟೆ ನೋವು ಪದೇಪದೆ ಮರುಕಳಿಸಿ ಸುಲೋಚನಾ ಅವರ ಸ್ಥಿತಿ ಹದೆಗೆಡಲು ಆರಂಭಿಸಿತು. ಬೆಂಗಳೂರಿನ ವೈದ್ಯರೊಬ್ಬರು ಸುಲೋಚನಾ ಅವರನ್ನು ಕೂಲಂಕಷವಾಗಿ ತಪಾಸಣೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಕೀವು ತುಂಬಿಕೊಂಡಿರುವುದು ಗೊತ್ತಾಗಿದೆ. ರೋಗಿಯ ಸ್ಥಿತಿ ಗಂಭೀರವಿದ್ದು ಕೂಡಲೇ ಬೆಂಗಳೂರಿನ ಸೈಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚನೆ ನೀಡಿದ್ದಾರೆ. ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನ್ ಮಾಡಿದಾಗ ಸುಲೋಚನಾ ಅವರ ಹೊಟ್ಟೆಯಲ್ಲಿ ಇರುವ ಒಂದು ಅಡಿಯಷ್ಟು ಗಾತ್ರದ ಬಟ್ಟೆಯೆ ಸುಲೋಚನಾ ಅವರ ಈ ಸ್ಥಿತಿಗೆ ಕಾರಣ ಎಂಬುದು ಕಂಡುಬಂದಿದೆ. ಕೂಡಲೇ ಅಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಸುಲೋಚನಾ ಅವರ ಜೀವ ಉಳಿದಿದೆ. ತದನಂತರ ಅವರ ಕರುಳಿನಲ್ಲಿ ಸಮಸ್ಯೆ ಕಂಡು ಬಂದು ಕರುಳಿನ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿದ್ದು ಇನ್ನೂ ಒಂದೆರಡು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.

ಶ್ರೀದೇವಿ ನರ್ಸಿಂಗ್ ಹೋಮ್‌ನವರ ನಿರ್ಲಕ್ಷ್ಯಕ್ಕೆ ಸುಲೋಚನಾ ಜೀವ ಕಳೆದುಕೊಳ್ಳುವುದರಿಂದ ಕೊನೆ ಕ್ಷಣದಲ್ಲಿ ಪಾರಾಗಿದ್ದಾರೆ. ಆಸ್ಪತ್ರೆಯ ವೈದ್ಯರ ವಿರುದ್ಧ ಮತ್ತು ಹೊಟ್ಟೆಯಲ್ಲಿ ಬಟ್ಟೆ ಇದ್ದುದನ್ನು ಸ್ಕ್ಯಾನ್ ಮಾಡಿಸಿದ ಬಳಿಕವೂ ತಿಳಿಸದ ವಿಕ್ರಂ ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮೊರೆ ಹೋಗುವುದಾಗಿ ಸುಲೋಚನಾ ಅವರ ಪತಿ ಅರುಣ್ ಶೆಟ್ಟಿ ಮತ್ತು ಕುಟುಂಬಿಕರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಆಸ್ಪತ್ರೆಯ ವೈದ್ಯರನ್ನು ಕೇಳಿದಾಗ ‘ತಪ್ಪು ಮಾಡುವುದು ಮಾನವ ಸಹಜ ಗುಣ’ ಎಂದು ಉಡಾಫೆಯ ಉತ್ತರ ನೀಡಿದರು ಎಂದು ಸುಲೋಚನಾ ಅವರ ಪತಿ ಹೇಳಿದ್ದು ಆಸ್ಪತ್ರೆಯ ವಿರುದ್ಧ ಸಾರ್ವಜನಿಕರು ಆಕ್ರೋಶಿತರಾಗಿದ್ದಾರೆ.

ಕುಂದಾಪುರ : ದೋಣಿ ದುರಂತ, 7 ಮಂದಿ ರಕ್ಷಣೆ, ಲಕ್ಷಾಂತರ ರೂ. ನಷ್ಟ


ಕುಂದಾಪುರ: ಸೋಮವಾರ ಬೆಳಗ್ಗೆ 11.00 ರ ಸುಮಾರಿಗೆ ಮೀನುಗಾರಿಕೆ ನಡೆಸಿ ಉಪ್ಪುಂದ ಮಡಿಕಲ್‌ಗೆ ಹಿಂದಿರುಗುತ್ತಿದ್ದ ನಾಡದೋಣಿಯೊಂದು ಸಮುದ್ರ ಅಲೆಯ ರಭಸಕ್ಕೆ ಸಿಕ್ಕಿ ಮಗುಚಿದ ಪರಿಣಾಮ, ಅದರಲ್ಲಿದ 7 ಮಂದಿ ಮೀನುಗಾರರನ್ನು ಸ್ಥಳೀಯರ ಸಹಕಾರದಿಂದ ರಕ್ಷಿಸಲಾಗಿದೆ. ದುರಂತದ ರಭಸಕ್ಕೆ ದೋಣಿ ಸಂಪೂರ್ಣ ಹಾನಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ದುರಂತದಲ್ಲಿ ಅಣ್ಣಪ್ಪ ಖಾರ್ವಿ, ಲಕ್ಷ್ಮಣ ಖಾರ್ವಿ ಹಾಗೂ ಮಂಜುನಾಥ ಖಾರ್ವಿ ಗಂಭೀರ ಗಾಯಗೊಂಡಿದ್ದರಿಂದ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ: ಕರ್ಕಿಕಳಿಯ ಸಾಗರಶ್ರೀ ರಾಣಿ ಬಲೆ ಜೋಡಿಯಲ್ಲಿ, ಅಣ್ಣಪ್ಪ ಖಾರ್ವಿ, ಲಕ್ಷ್ಮಣ ಖಾರ್ವಿ, ಮಂಜುನಾಥ ಖಾರ್ವಿ ನಿತ್ಯಾನಂದ ಖಾರ್ವಿ, ಮಹಾಬಲ ಖಾರ್ವಿ, ರಾಮ ಖಾರ್ವಿ, ಶೇಖರ್ ಖಾರ್ವಿ ಎಂಬುವವರು ಎಂದಿನಂತೆ ಸೋಮವಾರ ಬೆಳಗ್ಗಿನ ಜಾವ 6 ಗಂಟೆ ಸುಮಾರಿಗೆ ಮೀನುಹಿಡಿಯಲು ತೆರಳಿದ್ದರು. 10 ಗಂಟೆ ಸುಮಾರಿಗೆ ಮೀನು ಹಿಡಿದು, ದೋಣಿಯಲ್ಲಿ ತುಂಬಿಸಿಕೊಂಡು ಹಿಂತಿರುಗುತ್ತಿದ್ದಾಗ, ಸಮುದ್ರ ಪ್ರಕ್ಷುಬ್ದವಾಗಿರುವುದರಿಂದ ದೋಣಿಯು ಸಮುದ್ರದ ಅಲೆಯ ರಭಸಕ್ಕೆ ಸಿಕ್ಕಿ ಮಗುಚಿದ ಪರಿಣಾಮ ಮೀನುಗಾರರೆಲ್ಲಾ ಸಮುದ್ರಕ್ಕೆ ಬಿದ್ದರು. ಸಮುದ್ರದಲ್ಲಿ ಒದ್ದಾಡುತ್ತಿದ್ದ ಮೀನುಗಾರರನ್ನು ಸ್ಥಳೀಯರಾದ ರತ್ನಾಕರ ಖಾರ್ವಿ, ಜಯರಾಮ ಖಾರ್ವಿ, ಶಿವರಾಜ ಖಾರ್ವಿ, ಚಂದ್ರ ಖಾರ್ವಿ ಮೊದಲಾದವರು ಹರಸಾಹಸಪಟ್ಟು ರಕ್ಷಣೆ ಮಾಡಿದರು.
ದುರಂತದಿಂದಾಗಿ ಇಂಜಿನ್ ಸೇರಿದಂತೆ ದೋಣಿಯು ಸಂಪೂರ್ಣ ಹಾನಿಯಾಗಿದೆ, ಅದರಲ್ಲಿದ್ದ 200ಕ್ಕೂ ಅಧಿಕ ಬುಟ್ಟಿಯ ಮೀನು ಸಮುದ್ರ ಪಾಲಾಗಿದ್ದು ಒಟ್ಟು 10 ಲಕ್ಷಕ್ಕೂ ಮಿಕ್ಕಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾದ್ಯಕ್ಷರಾಗಿ ಎ ಕೆ ಯೂಸೂಫ್ ಕುಂದಾಪುರ


akyusuf
ಉಡುಪಿ:- ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾಗಿ ಸಾಮಾಜಿಕ ಧುರೀಣ ಹಾಗೂ ಉಧ್ಯಮಿ ಎ ಕೆ ಯೂಸೂಫ್ ಕುಂದಾಪುರ ಇವರನ್ನು ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.. ಕುಂದಾಪುರ ಜಾಮಿಯಾ ಮಸೀದಿಯ ಆಡಳಿತ ಟ್ರಸ್ಟಿಯಾಗಿ, ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿರುವ ಇವರು ಹಲವು ಸಂಘ ಸಂಸ್ಥೆಗಳಲ್ಲೂ ಸಕ್ರಿಯವಾಗಿ ಕರ್ತವ್ಯನಿರ್ವಹಿಸುತ್ತಿದ್ದಾರೆ..

ಗಂಗೊಳ್ಳಿಯಲ್ಲಿ ಪಾದಯತ್ರೆ ಮೂಲಕ ಕಾಶ್ಮೀರ ಪ್ರವಾಹ ಪೀಡಿತರ ಪರಿಹಾರ ನಿಧಿ ಸಂಗ್ರಹ


rss
ಗಂಗೊಳ್ಳಿ:-ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಂಗೊಳ್ಳಿ ಘಟಕದ ಸದಸ್ಯರು ಗಂಗೊಳ್ಳಿಯಲ್ಲಿ ಪಾದಯತ್ರೆ ಮೂಲಕ ಕಾಶ್ಮೀರ ಪ್ರವಾಹ ಪೀಡಿತರ ಪರಿಹಾರ ನಿಧಿಯನ್ನು ಸಂಗ್ರಹಿಸಿದರು.
ಶ್ರೀ ರಾಮ ಮಂದಿರದ ಬಳಿ ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎಸ್.ಚಿಕ್ಕಯ್ಯ ಪೂಜಾರಿ ಹಾಗೂ ಗುಜ್ಜಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ ಮೇಸ್ತ ನಿಧಿ ಸಂಗ್ರಹ ಪಾದಯಾತ್ರೆಗೆ ಚಾಲನೆ ನೀಡಿದರು. ಆರೆಸ್ಸೆಸ್ ಮುಖಂಡ ಉಮಾನಾಥ ದೇವಾಡಿಗ, ಹಿಂಜಾವೇ ಗಂಗೊಳ್ಳಿ ಘಟಕದ ಸಂಚಾಲಕ ರತ್ನಾಕರ ಗಾಣಿಗ, ಗಂಗೊಳ್ಳಿ ಗ್ರಾಪಂ ಸದಸ್ಯರಾದ ಬಿ.ಲಕ್ಷ್ಮೀಕಾಂತ ಮಡಿವಾಳ, ಬಿ.ಗಣೇಶ ಶೆಣೈ, ಮಾಜಿ ಗ್ರಾಪಂ ಸದಸ್ಯ ಬಿ.ರಾಘವೇಂದ್ರ ಪೈ, ಹಿಂದು ಸಂಘಟನೆಗಳ ಪ್ರಮುಖರಾದ ರವೀಂದ್ರ ಪಟೇಲ್, ಮೋಹನ ಖಾರ್ವಿ, ಶ್ರೀಧರ ನಾಯ್ಕ್, ಅಶೋಕ ಪೂಜಾರಿ, ಜಯರಾಮ ದೇವಾಡಿಗ (ರಾಜ) ಮೊದಲಾದವರು ಉಪಸ್ಥಿತರಿದ್ದರು. ಪಾದಯಾತ್ರೆ ಮೂಲಕ ಸಂಗ್ರಹಿಸಲಾದ 25 ಸಾವಿರ ರೂ.ಗಳನ್ನು ಆರೆಸ್ಸೆಸ್ ಸಂಚಾಲಿತ ಸಂತ್ರಸ್ತ ಪರಿಹಾರ ನಿಧಿಗೆ ನೀಡಲಾಯಿತು